21 ನೇ ಶತಮಾನದಲ್ಲಿ ಭಾಷೆಯ ಬೆಳವಣಿಗೆ

Written by: Ajit Kulkarni

ಭಾಷೆ ಎಂಬುದು ಸಂಸ್ಕೃತಿಯ ತೊಟ್ಟಿಲು, ಭಾಷೆಯ ಮಡಿಲಲ್ಲಿ ಅನೇಕ ನಾಗರೀಕತೆಗಳು ಬೆಳೆದು ಬಂದಿವೆ, ಸಾಮ್ರಾಜ್ಯಗಳು ಕಟ್ಟಲ್ಪಟ್ಟಿವೆ. ಭಾಷೆ ಎಂಬುದು ಮಾನವ ಜನಾಂಗದ ನೋವು ನಲಿವುಗಳ ವ್ಯಕ್ತತೆಯಾಗಿದೆ, ಜ್ಞಾನದ ಹರಿವಾಗಿದೆ, ವೈವಿಧ್ಯತೆಯ ಸೊಗಡಾಗಿದೆ. ಇತಿಹಾಸದ ಕಾಲಮಾನಗಳನ್ನು ಅವಲೋಕಿಸಿದರೆ ಭಾಷೆಯು ಅನೇಕ ಸವಾಲುಗಳನ್ನು ಎದುರಿಸಿದ್ದು ಕಂಡು ಬರುತ್ತದೆ. ಯಾವಾಗ ಯಾವಾಗ ಒಂದು ಜನಾಂಗವು ಮತ್ತೊಂದು ಜನಾಂಗದ ವಸಾಹತುವಿನ ಒಳಗೆ ಬರುತ್ತದೆಯೋ ಆವಾಗ ಭಾಷೆಗೂ ಒಂದಿಷ್ಟು ಪರಿಣಾಮ ಉಂಟಾಗುತ್ತದೆ. ಆ ಪರಿಣಾಮವು ಆ ಭಾಷೆಯ ಅಸ್ತಿತ್ವವನ್ನು ಅಲುಗಾಡಿಸಿದ ಪ್ರಯತ್ನವಾಗಿರಬಹುದು, ಸೊಗಡನ್ನು ಕದಡಿದ್ದಾಗಿರಬಹುದು ಅಥವಾ ಆ ಭಾಷೆಯನ್ನು ಇನ್ನೂ ಮೇಲುಮಟ್ಟಕ್ಕೂ ತರುವ ಪ್ರಯತ್ನವೂ ಆಗಿರಬಹುದು. 

ಕನ್ನಡ ಭಾಷೆಯನ್ನು ಅವಲೋಕಿಸಿದರೆ, ಅದು ಕಳೆದ 500 ವರ್ಷಗಳಲ್ಲಿ ಅನೇಕರ ಆಳ್ವಿಕೆಯಲ್ಲಿ ಅರಳಿ, ನರಳಿ, ಬಳಲಿ, ಬೆಳೆದು ಬಂದದ್ದು ಕಂಡು ಬಂದಿದೆ. ಬ್ರಿಟೀಷರು, ಪೋರ್ಚುಗೀಸರು, ಮರಾಠರು, ಮುಸ್ಲಿಂ ಆಳ್ವಿಕೆಗಾರರು, ಹೀಗೆ ಮುಂತಾದವರು ಕರ್ನಾಟಕವನ್ನು ಆಳಿ, ಕನ್ನಡದ ಮೇಲೆ ತಮ್ಮದೇ ಗುರುತನ್ನು ಬಿಟ್ಟು ಹೋಗಿದ್ದಾರೆ. ಇಂದಿಗೂ ಮುಂಬೈ ಕರ್ನಾಟಕ ಭಾಗದ ಆಡುಭಾಷೆಯಲ್ಲಿ ಮರಾಠಿ ಪದಗಳು ಕಂಡುಬಂದರೆ, ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಉರ್ದು ಪದಗಳ ಬಳಕೆ ಕಂಡು ಬರುತ್ತದೆ. ಟಿಪ್ಪು ಆಳ್ವಿಕೆಯಿಂದಾಗಿ ಪರ್ಷಿಯನ್ ಪಾರಿಭಾಷಿಕ ಪದಗಳನ್ನು ಈಗಲೂ ಕನ್ನಡದಲ್ಲಿ ಕಾಣಬಹುದು. 

ಬ್ರಿಟೀಷರು ಭಾರತವನ್ನು ಬಹುಕಾಲ ಆಳ್ವಿಕೆ ನಡೆಸಿದರು. ಅವರಿಗೂ ಮೊದಲು ಫ್ರೆಂಚರು, ಪೋರ್ಚುಗೀಸರು ಕರ್ನಾಟಕವನ್ನು ಆಳಿದರು. ಹೀಗೆ ಇವರೆಲ್ಲ ಕನ್ನಡದಲ್ಲಿ ಕೃಷಿಯನ್ನು ನಡೆಸಿ ಕನ್ನಡದ ವ್ಯಾಕರಣ, ಪದಕೋಶ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ರೆವರೆಂಡ್ ಕಿಟ್ಟಲ್ ಅವರು ಕನ್ನಡ ಭಾಷೆಯ ಮೊತ್ತ ಮೊದಲ ಡಿಕ್ಷನರಿಯನ್ನು ಹೊರತಂದರು. ಅನೇಕ ಆಂಗ್ಲ ಆಧಿಕಾರಿಗಳು ಕನ್ನಡ ಕಲಿಕಾ ಶಾಲೆಗಳನ್ನು ತೆರೆದರು. ಅಷ್ಟೇ ಅಲ್ಲದೆ, ಭಾಷಾ ಸಂಶೋಧನೆಗಳನ್ನು ನಡೆಸಿದ ಅನೇಕ ವಿದೇಶಿಯರು ಆಗಿ ಹೋಗಿದ್ದಾರೆ. ಇತಿಹಾಸ ಸಂಶೋಧನೆಯಲ್ಲೂ ಅವರ ಕೊಡುಗೆ ಕಡಿಮೆ ಏನಲ್ಲ. ಆದರೆ ಅವರಿಗಿಂತ ಮುಂಚಿನ ಕಾಲದಲ್ಲಿ ಆಳ್ವಿಕೆ ಮಾಡಿದ ಮರಾಠರು, ನಿಜಾಮರು, ಕನ್ನಡ ಭಾಷೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆಯನ್ನು ನೀಡಿದಂತೆ ಕಂಡು ಬರುವುದಿಲ್ಲ. 

ಭಾರತವು ಸ್ವಾತಂತ್ರವನ್ನು ಪಡೆದ ಬಳಿಕ ಅನೇಕ ಚೂರು ಚೂರುಗಳಾಗಿ ಒಡೆದು ಹೋಗಿದ್ದ ಕನ್ನಡ ಪ್ರದೇಶಗಳು ಒಂದಾಗಲು ಹೋರಾಟ ನಡೆಸಲಾಯಿತು. ಮೈಸೂರು, ಮುಂಬೈ ಕರ್ನಾಟಕ, ಮದ್ರಾಸ್ ಪ್ರೆಸಿಡೆನ್ಸಿ, ಹೈದಾರಾಬಾದ್ ಕರ್ನಾಟಕ ಅಷ್ಟೇ ಅಲ್ಲದೆ ಅನೇಕ ಸ್ವತಂತ್ರ ಸಾಮ್ರಾಜ್ಯಗಳಲ್ಲಿ ಒಡೆದು ಹೋಗಿದ್ದ ಕರ್ನಾಟಕವು ಜನರ ಹೋರಾಟದಿಂದಾಗಿ ಕರ್ನಾಟಕ ರಾಜ್ಯವಾಗಿ ರೂಪುಗೊಂಡು, ಕನ್ನಡವು ಇಲ್ಲಿನ ಅಧಿಕೃತ ಭಾಷೆಯಾಯಿತು. ಹೀಗೆ ಅನೇಕ ವರ್ಷಗಳವರೆಗೆ ಪರಭಾಷೆಯ ಆಡಳಿತದಲ್ಲಿದ್ದ ಜನರಿಗೆ ತಮ್ಮದೇ ಭಾಷೆಯಲ್ಲಿ ಆಡಳಿತ, ಶಿಕ್ಷಣ, ನಾಗರೀಕ ಸೇವೆ, ಉದ್ಯೋಗ ಮುಂತಾದವುಗಳನ್ನು ಪಡೆಯುವ ಸೌಭಾಗ್ಯ ದೊರೆಯಿತು. ಆನಂತರ ಬಂದ ಸರಕಾರಗಳು ಭಾಷೆಯ ಬೆಳವಣಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದವು. ಕನ್ನಡ ಕೀಬೋರ್ಡ್, ಕೀಪ್ಯಾಡ್, ಟೈಪಿಂಗ್ ಟೂಲ್‌ಗಳನ್ನು ಆವಿಷ್ಕರಿಸಲಾಯಿತು. 

20 ನೇ ಶತಮಾನದ ಕೊನೆಭಾಗದಲ್ಲಿ ನಡೆದ ತಾಂತ್ರಿಕ ಸಂಶೋಧನೆ ಮತ್ತು ಕಂಪ್ಯೂಟರ್ ಹಾಗೂ ಇಂಟರ್‌ನೆಟ್ ಅವಿಷ್ಕಾರಗಳು ಜಗತ್ತನ್ನು ಇನ್ನಿಲ್ಲದಂತೆ ಬದಲಾಯಿಸಿಬಿಟ್ಟಿತು. ಜನರು ಇಂಟರ್‌ನೆಟ್ ಮೂಲಕ ಜಾಗತಿಕ ಮಟ್ಟದಲ್ಲಿ ಪರಸ್ಪರ ಸಂವಹನ ನಡೆಸಲು ಸಮರ್ಥರಾದರು. ಈ ತಾಂತ್ರಿಕ ಬದಲಾವಣೆಯು ಎಲ್ಲರ ಮೇಲೂ, ಎಲ್ಲಾ ದೇಶಗಳ ಮೇಲೂ ಉಂಟಾಯಿತು. ಮೊದಮೊದಲು, ಈ ತಾಂತ್ರಿಕ ಸೌಲಭ್ಯಗಳು ಇಂಗ್ಲೀಷ್ ಭಾಷೆಯನ್ನು ಬಲ್ಲವರಿಗೆ ಸೀಮಿತವಾಗಿದ್ದರೂ, ಲೋಕಲೈಸೇಶನ್ ಮೂಲಕ ಇಂಗ್ಲೀಷ್ ಗೊತ್ತಿರದ ಬಹುತೇಕರನ್ನು ತಲುಪಲು ಯೋಜಿಸಲಾಯಿತು. ಈ ಒಂದು ಮಹತ್ವದ ನಿರ್ಧಾರದಿಂದಾಗಿ, ಮೊಬೈಲ್ ಮತ್ತು ಇಂಟರ್‌ನೆಟ್ ಬಳಕೆಯ ವೇಗವು ಹೆಚ್ಚಿ, ಹಳ್ಳಿ ಹಳ್ಳಿಯಲ್ಲಿನ ಜನರೂ ಕೂಡ ತಂತ್ರಜ್ಞಾನದ ಲಾಭವನ್ನು ಪಡೆಯುವಂತಾಯಿತು. 

ಕಾರ್ಪೋರೇಟ್ ಕಂಪನಿಗಳು, ವಾಣಿಜ್ಯ ಸಂಸ್ಥೆಗಳು, ಬ್ಯಾಂಕ್‌ಗಳೂ ಕೂಡ ತಾ ಮುಂದು ನೀ ಮುಂದು ಮುಂದು ಎನ್ನುವ ರೀತಿಯಲ್ಲಿ ಲೋಕಲೈಸೇಶನ್ ಅನ್ನು ಆಯ್ದುಕೊಂಡು ಭಾರತೀಯ ಭಾಷೆಗಳಲ್ಲಿ ಸೇವೆ ನೀಡಲು ಮುಂದಾದವು. ಈ ಮೂಲಕ ತಮ್ಮ ಮಾರುಕಟ್ಟೆಯನ್ನು ಹಿಗ್ಗಿಸಿಕೊಂಡವು. ಕ್ರೀಡಾ ಪ್ರಸಾರ, ಸಿನಿಮಾ, ವಿಮೆ, ಬ್ಯಾಂಕಿಂಗ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಇಂದು ಭಾರತೀಯ ಭಾಷೆಗಳಲ್ಲಿ ಸೇವೆ ಮತ್ತು ಸೌಲಭ್ಯಗಳು ಲಭಿಸಲು ಆರಂಭಿಸಿವೆ. ಇದರಿಂದಾಗಿ ವಾಣಿಜ್ಯಿಕವಾಗಿ ಸಂಸ್ಥೆಗಳಿಗೆ ಲಾಭವಾಗುವುದು ಒಂದಾದರೆ, ಜನಸಾಮಾನ್ಯರಿಗೂ ತಮ್ಮದೇ ಭಾಷೆಯಲ್ಲಿ ಸೌಲಭ್ಯಗಳನ್ನು ಪಡೆಯುವುದು ಕೂಡ ಗಮನಾರ್ಹವಾಗಿದೆ. 

ಹೀಗೆ 21 ನೇ ಶತಮಾನವು ಭಾಷೆಯ ದೃಷ್ಟಿಯಿಂದ ನೋಡಿದರೆ, ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಬಹುದು. ಈಗ ಪ್ರಾದೇಶಿಕ ಭಾಷೆಗಳೂ ಕೂಡ ಜಾಗತಿಕವಾಗಿ ಪೈಪೋಟಿ ನೀಡಲು ಚಿಂತನೆ ನಡೆಸುತ್ತಿವೆ. ಜಾಗತಿಕವಾಗಿ ಬೆಳೆಯುವ ಮತ್ತು ತಮ್ಮ ಗುರುತನ್ನು ಜಾಗತಿಕ ನಕ್ಷೆಯಲ್ಲಿ ಮೂಡಿಸುವ ಬಯಕೆ ಮತ್ತು ಹುಮ್ಮಸ್ಸು ಈಗ ಭಾಷಿಕರಲ್ಲಿ ಮನೆ ಮಾಡಿದೆ. ಇದಕ್ಕೆಲ್ಲ ಕಾರಣ ತಾಂತ್ರಿಕ ಬೆಳವಣಿಗೆ ಮತ್ತು ಕೈಗೆಟಗುವ ದರದಲ್ಲಿ ಆ ತಂತ್ರಜ್ಞಾನದ ಲಭ್ಯತೆ. 

2017 ರಲ್ಲಿ KPMG ಮತ್ತು ಗೂಗಲ್ ಸಂಸ್ಥೆಗಳು ಒಂದಾಗಿ ಭಾರತೀಯ ಭಾಷೆಗಳ ಕುರಿತು ಸಂಶೋಧನೆಯನ್ನು ನಡೆಸಿದವು. ಈ ಮೂಲಕ ಭಾಷೆಗಳ ಬೆಳವಣಿಗೆ ಮುಂದಿನ 4-5 ವರ್ಷಗಳಲ್ಲಿ ಹೇಗಿರುತ್ತದೆ, ಭಾಷೆಯನ್ನು ಅಳವಡಿಸಿಕೊಳ್ಳುವ ದರ ಏನು? ಹೀಗೆ ಮುಂತಾದ ಪ್ರಶ್ನೆಗಳನ್ನು ಇಟ್ಟುಕೊಂಡು ಒಂದು ಅಧ್ಯಯನ ನಡೆಸಲಾಯಿತು. ಈ ಮೂಲಕ ಕಂಡು ಬಂದದ್ದು ಏನೆಂದರೆ, ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಅಳವಡಿಕೆ ದರವು ಹಚ್ಚಿನ ಮಟ್ಟದಲ್ಲಿದೆ. ಭಾರತೀಯರು ತಮ್ಮ ಮಾತೃಭಾಷೆಯಲ್ಲಿ ಸೇವೆಯನ್ನು ಪಡೆಯಲು ಮುಂದಾಗುತ್ತಿದ್ದು, ಯಾವುದೇ ಜಾಹೀರಾತುಗಳು ಮಾತೃಭಾಷೆಯಲ್ಲಿ ಇದ್ದರೆ ಅದಕ್ಕೆ ಹೆಚ್ಚಿನ ಸ್ಪಂದನೆ ತೋರುತ್ತಾರೆ ಎಂದು ಕಂಡು ಬಂದಿದೆ. ಅಷ್ಟೇ ಅಲ್ಲದೆ ಡಿಜಿಟಲ್ ಪಾವತಿಯಲ್ಲೂ ಕೂಡ, ಸೌಲಭ್ಯಗಳು ಮಾತೃಭಾಷೆಯಲ್ಲಿದ್ದರೆ ಮಾತ್ರ ಕನ್ನಡ, ತೆಲುಗು, ತಮಿಳು ಭಾಷಿಕರು ಹೆಚ್ಚಿನ ಸ್ಪಂದನೆ ನೀಡುತ್ತಿದ್ದಾರೆ ಎಂದು ಕಂಡು ಬಂದಿದೆ. 

ಕ್ರೀಡಾ ವಾಹಿನಿಗಳು ಮೊದಲು ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಮಾತ್ರ ಲಭ್ಯವಿದ್ದವು. ಆದರೆ ಈಗ ಕನ್ನಡ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಕ್ರಿಕೆಟ್ ಸೇರಿದಂತೆ ಅನೇಕ ಆಟೋಟಗಳ ನೇರ ಪ್ರಸಾರವನ್ನು ನೋಡಬಹುದಾಗಿದೆ. ಹಾಗೆಯೇ ನ್ಯಾಷನಲ್ ಜಿಯೋಗ್ರಾಫಿಕ್‌ನಂತಹ ಮುಂತಾದ ಮಾಹಿತಿ-ರಂಜನೆ ಚಾನಲ್‌ಗಳೂ ಕೂಡ ಈಗ ಪ್ರಾದೇಶಿಕ ಭಾಷೆಗಳಲ್ಲಿ ಫೀಡ್‌ಗಳನ್ನು ಕೊಡುತ್ತಿವೆ. 

ಸರಕಾರಿ ಸೇವೆಗಳು, ಮಾಹಿತಿ ಹಾಗೂ ಸೌಲಭ್ಯಗಳು ಈಗ ಡಿಜಿಟಲ್ ರೂಪದಲ್ಲಿ ಬರುತ್ತಿರುವುದರಿಂದ ಹಾಗೂ ಅವು ಕನ್ನಡದಲ್ಲೂ ದೊರೆಯುವಂತೆ ಆಗಿರುವುದರಿಂದ ಜನರಿಗೆ ಬಹಳ ಸುಲಭವಾಗಿದೆ. ಡಿಜಿಟಲ್ ಮನರಂಜನೆ ಕ್ಷೇತ್ರವು ದೊಡ್ಡ ಕ್ಷೇತ್ರವಾಗಿದ್ದು, ಅಲ್ಲೂ ಕೂಡ ಕನ್ನಡ ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಅಪಾರ ಕಂಟೆಂಟ್ ಲಭ್ಯವಿದೆ. 

ಹೀಗೆ ಹತ್ತು ಹಲವಾರು ವಲಯಗಳಲ್ಲಿ ಭಾಷೆಯು ಬೆಳೆಯುತ್ತಿರುವುದರಿಂದ ಈ ಬೆಳವಣಿಗೆಯೂ ಹಲವು ಸವಾಲುಗಳನ್ನು ತಂದೊಡ್ಡಿದೆ. ಜನರಿಗೆ ಸುಲಭವಾಗಿ ಅರ್ಥವಾಗುವ ಪದಗಳನ್ನು ಬಳಸುವುದು, ಸುಲಭ ವಾಕ್ಯಗಳನ್ನು ರಚಿಸುವುದು, ಪಾರಿಭಾಷಿಕ ಪದಗಳ ಬಳಕೆಯೊಂದಿಗೆ ತಂತ್ರಜ್ಞಾನ ಅಥವಾ ಸೇವೆಯನ್ನು ಜನರಿಗೆ ಹತ್ತಿರವಾಗಿಸುವುದು ಈ ಸಮಯದ ಸವಾಲುಗಳಲ್ಲಿ ಮುಖ್ಯವಾಗಿವೆ. ಕ್ಲಿಷ್ಟ ಪದಗಳು, ಗ್ರಾಂಥಿಕ ಭಾಷೆಯ ಬಳಕೆ ಮಾಡಿದರೆ ಜನಸಾಮನ್ಯರಿಗೆ ಅದು ಅರ್ಥವಾಗಿದೆ, ಅವರು ಆ ಸೇವೆಯಿಂದ ಹೊರಗುಳಿಯಬಹುದು. ಇದರಿಂದಾಗಿ ಯಾವುದೇ ಉತ್ಪನ್ನ ಅಥವಾ ಸೇವೆಯ ಬಳಕೆಯ ಕುರಿತು ಹಿನ್ನಡೆ ಉಂಟಾಗಬಹುದು. 

ಈ ಮೂಲಕ ಹೆಚ್ಚುತ್ತಿರುವ ಭಾಷೆಯ ಬಳಕೆಯು ಅನೇಕ ಉದ್ಯೋಗಾವಕಾಶಗಳನ್ನು ತೆರೆದಿದೆ. ಇಂದು ಅನುವಾದಕರು, ಭಾಷಾ ಪರಿಣಿತರ ಅಗತ್ಯತೆಯು ಅನೇಕ ಕ್ಷೇತ್ರಗಳಲ್ಲಿ ಕಂಡು ಬರುತ್ತಿದೆ. ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಅನುವಾದ ಮಾಡುವುದು ಇವರ ಹೊಣೆಯಾಗಿರುತ್ತದೆ. ಇಂದಿನ ಯುವಕರ ಗಮನವಹಿಸುವ ಸಮಯವು ತೀರಾ ಕಡಿಮೆ ಇರುವುದರಿಂದ ಅವರಿಗೆ ಅರ್ಥವಾಗದ ನುಡಿಗಟ್ಟನ್ನು ಬಳಸಿದರೆ, ಅವರ ಗಮನವು ಬೇರೆ ಕಡೆಗೆ ಜಾರಿಬಿಡುತ್ತದೆ. ಹೀಗಾಗಿ ಅವರ ಗಮನವನ್ನು ಹಿಡಿದಿಡುವುದು ಪ್ರಮುಖವಾಗಿರುತ್ತದೆ.

ಭಾರತದ ಇಂದಿನ ಶಿಕ್ಷಣ ಕ್ಷೇತ್ರವನ್ನು ಗಮನಿಸಿದರೆ, ಒಂದಿಷ್ಟು ನಿರಾಶೆ ಕಾಡುತ್ತದೆ. ಮುಂದುವರೆಯುತ್ತಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಇಂದು ಆಂಗ್ಲ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಇಂಗ್ಲೀಷ್ ಭಾಷೆಯನ್ನು ಕಲಿಯುವುದೊಂದೇ ಬದುಕಿನ ಪರಮಗುರಿ ಎಂಬಂತೆ ನಂಬಿದವರು ಅನೇಕರಿದ್ದಾರೆ. ಈ ಬೆಳವಣಿಗೆಯು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಇಡೀ ಭಾರತದಲ್ಲಿ ಕಂಡು ಬರುತ್ತಿದೆ. ಶಿಕ್ಷಣ ತಜ್ಞರ ಪ್ರಕಾರ ಮಗುವಿನ ಮೊದಲ ಕಲಿಕೆಯು ತಾಯ್ನುಡಿಯಲ್ಲೇ ಆಗಬೇಕು, ಹಾಗಾದರೆ ಮಾತ್ರ ಮಗುವಿನ ಸೃಜನಾತ್ಮಕ ಶಕ್ತಿ, ಕಲ್ಪನಾ ಶಕ್ತಿಗಳು ಸರಿಯಾಗಿ ವಿಕಸನಗೊಳ್ಳುತ್ತವೆ. ಆದರೆ ಈ ಸಲಹೆಯನ್ನು ಪಕ್ಕಕ್ಕೆ ತಳ್ಳಿ ಇಂದು ದೇಶದ ಉದ್ದಗಲಕ್ಕೂ ನಾಯಿಕೊಡೆಯಂತೆ ಆಂಗ್ಲ ಮಾಧ್ಯಮ ಶಾಲೆಗಳು ತೆರೆಯುತ್ತಿವೆ. ಈ ಬೆಳವಣಿಗೆಯು ಭಾಷೆಯ ದೃಷ್ಟಿಯಿಂದ ನೋಡಿದರೆ ದುರದೃಷ್ಟಕರವಾಗಿದೆ ಎಂದು ಹೇಳಬಹುದು. ಯಾವ ಜನಾಂಗವು ತನ್ನ ಭಾಷೆಯನ್ನು ಕಳೆದುಕೊಳ್ಳುತ್ತದೆಯೋ, ಅದು ತನ್ನ ಸಂಸ್ಕೃತಿ ಮತ್ತು ಆತ್ಮವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ನಾವೆಲ್ಲಾ ತಿಳಿದುಕೊಳ್ಳಬೇಕಾಗಿದೆ. 

ಇಂಗ್ಲೀಷ್ ಭಾಷೆಯನ್ನು ಕಲಿಯುವುದಕ್ಕೂ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕಲಿಯುವುದಕ್ಕೂ ವ್ಯತ್ಯಾಸಗಳಿವೆ. ಭಾಷೆಯಾಗಿ ಇಂಗ್ಲೀಷ್ ಅನ್ನು ಕಲಿಯುವುದು ಇಂದಿನ ಕಾಲಮಾನಕ್ಕೆ ಅಗತ್ಯ. ಆದರೆ ಅದಕ್ಕಾಗಿ ಜನರು ತಮ್ಮ ಮಾತೃಭಾಷೆಯನ್ನೇ ತೊರೆದರೆ, ಅದು ಭಾಷೆಯ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಮ್ಮ ದೇಶದ ಅನೇಕ ವಿಜ್ಞಾನಿಗಳಾದ ಎಪಿಜೆ ಅಬ್ದುಲ್ ಕಲಾಮ್, ಯು ಆರ್ ರಾವ್ ಮುಂತಾದವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಾಯ್ನುಡಿಯಲ್ಲೇ ಕಲಿತವರಾಗಿದ್ದಾರೆ. 

ಇಂದು ಅಭಿವೃದ್ಧಿ ಹೊಂದಿರುವ ದೇಶಗಳನ್ನು ಅವಲೋಕಿಸಿದರೆ ನಮಗೆ ಕಂಡು ಬರುವ ಮುಖ್ಯವಾದ ಸಂಗತಿ ಏನೆಂದರೆ, ಅವುಗಳೆಲ್ಲ ಮಾತೃಭಾಷೆಯನ್ನೇ ನೆಚ್ಚಿಕೊಂಡಿವೆ. ಅಲ್ಲಿನ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆಡಳಿತ ಮುಂತಾದವುಗಳನ್ನು ತಮ್ಮ ಭಾಷೆಯ ಸುತ್ತಲೇ ಕಟ್ಟಿಕೊಂಡಿರುವುದು ಕಂಡು ಬರುತ್ತದೆ. ಆ ದೇಶಗಳನ್ನು ನೋಡಿ ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿಕೊಳ್ಳಬೇಕಿದೆ ಹಾಗೂ ನಮ್ಮ ಭಾಷೆಯನ್ನು ಬೆಳೆಸುವ ಅಗತ್ಯವಿದೆ.

    Leave a Reply

    Your email address will not be published.